September 24, 2010

ಕಲೈಡೋಸ್ಕೋಪ್ : ಮೂರು ಗಾಜಿನ ರೂಪಾಂತರ

ಈ ಕಲೈಡೋಸ್ಕೋಪಿನಲ್ಲಿ ಮೂರೇ ಗಾಜುಗಳಿವೆ, ಬಣ್ಣವಿಲ್ಲದ ಒಂದೇ ತರದ ಗಾಜಿನ ಚೂರುಗಳು ಕೂಡಿವೆ. ಅದರೊಳಗೆ ಹಳೆಯ ಮುರಿದ ಬಳೆಗಳ ಚೂರುಗಳನ್ನಿಟ್ಟರೆ ಅವಕ್ಕೆ ಹೊಸದೊಂದು ರೂಪು. ಮನಸಿನ ಸಂಯೋಜನೆಯ ಅಪ್ಪಟ ಹೊಸ ರೂಪು. ಪುಟ್ಟ ಮಗುವಿನ ಕಣ್ಣಿನಲ್ಲಿ ಅರಳುವ ಕುತೂಹಲದ ರೂಪು. ಆ ಪ್ರತಿಬಿಂಬಗಳು ನಮ್ಮೆಲ್ಲರ ಮೇಲೂ ಹಾರುತ್ತಿರುವ  ಕನಸಿನ ಗಾಳಿಪಟಗಳನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡು ನಮ್ಮೊಳಗೇ ಅಲೆಯತೊಡಗುತ್ತವೆ.

ಗೊತ್ತುಗುರಿಯಿಲ್ಲದೆ ಅಲೆಯತೊಡಗುತ್ತವೆ,ಅವುಗಳದೇ ರೀತಿಯಲ್ಲಿ..  

ಚಿಕ್ಕವನಿದ್ದಾಗ ಶಾಲೆಯ ಗೆಳತಿಯೊಬ್ಬಳು ತೋರಿಸಿದ್ದ ಮೂರುಗಾಜಿನ  ಪುಟ್ಟ ಕಲೈಡೋಸ್ಕೋಪೊಂದು ನನ್ನ ಮನದೊಳಗೆ ಅಚ್ಚಾಗಿ ಕೂತಿದೆ, ಉಳಿದಿದೆ ಶಾಶ್ವತವಾಗಿ. ನೂರು ಬಣ್ಣಗಳ ಕನಸಿನ ಸಾಧ್ಯತೆಗಳನ್ನು ತೋರಿಸುತ್ತ ನಡೆಸಿದೆ.  

ಈ ಜಗದ ಕಣ್ಣಾಮುಚ್ಚಾಲೆಗಳ ನಡುವೆಯೂ, ನನ್ನ "ರೈಲ್ವೆ ಸ್ಟೇಷನ್ನಿನಲ್ಲಿ ಕಾಯುತ್ತಿರುವಂತಿರುವ" ಅಭದ್ರ ತಲ್ಲಣಗಳನ್ನು  ಕಾಯುತ್ತ, ಸಂತಯಿಸುತ್ತ ದೀಪಶಿಖೆಯಂತೆ ಕೈ ಹಿಡಿದು ನಡೆಸುತ್ತಿದೆ.

ಕೇಳಿದ್ದೇನೆ ಅದನ್ನು: "ಹೇಗೆ ತೋರಿಸುತ್ತಿಯೇ ಈ ಎಲ್ಲ ವಿನ್ಯಾಸಗಳನ್ನು?"
ಅದು ಹೇಳುತ್ತದೆ: "ನನ್ನ ಹಾಗೆ ನಿನ್ನ ಒಳಗನ್ನು ಬೆಳಕಿಗೆ ಬಿಚ್ಚಿಡು"  
ಹಾಗೆ ಬಿಚ್ಚಿಟ್ಟಾಗ ತೋರುತ್ತದೆ- ಒಳಗು  ಒಳಗಿನ ಒಳಗು.. ಹೊರಗಿನ ಒಳಗು, ಅದರ ವಿನ್ಯಾಸ, ಜೀವಗಳನು ಹಿಡಿದಿಟ್ಟ ನೂಲಿನ ಎಳೆ,
ಆ ವರ್ತಿ ಯನ್ನು ಹಿಡಿದಿಡುವ ದೀಪ, ಗುಬ್ಬಿಗೂಡು, ಮಂಜಿನ ಹನಿ, ಪುಟ್ಟ ಶಾಲೆಯ ಮಕ್ಕಳ ಕಲರವ..
ಹಾಗೆ ಬಿಚ್ಚಿಟ್ಟಾಗ ಸಿಗುತ್ತದೆ ನಮ್ಮದೇ ರೂಹುಗಳ ಲಯ, ಎಲ್ಲವನ್ನು ಒಳಗೊಳ್ಳುವ ಅಮ್ಮನ ಒಡಲಿನಂಥ ಬೆಚ್ಚಗಿನ ಉಸಿರು.. ಕೈ ಹಿಡಿದು ನಡೆಯಲು.. 
Related Posts Plugin for WordPress, Blogger...