ರಜೆಗೆ ಊರಿಗೆ ಹೋದಾಗ ಮನೆಯ ಮೂಲೆಯೊಂದರ ಕುರ್ಚಿಯಲ್ಲಿ ಕೂತಿದ್ದೆ ಕನಸುಗಳ ಬೆನ್ನೆರುತ.. ಅದೇ ಸಮಯ ಕರೆಂಟು ಕೈಕೊಟ್ಟಿತು(ಸಾಥ್ ಕೊಟ್ಟಿತು..!), ಹಳ್ಳಿಯಲ್ಲಿ ಇದು ಮಾಮೂಲು, ಇಂದು ಹೋದ ಕರೆಂಟು ಇಂದೇ ಬರುತ್ತದೆಂಬ ಗ್ಯಾರಂಟಿಯೂ ಇಲ್ಲ ಬಿಡಿ..! ನೀರವ ಮೌನದಲ್ಲಿ ಕುಳಿತೆ. ಮನೆಗೆ ಲೈಟ್ಗಾಗಿ ಸೋಲಾರ್ ಕೂರಿಸಿದರೆ ಹೇಗೆ? ತಟ್ಟನೆ ಕನಸೊಂದು ಸುಳಿಯಿತು, ಜೊತೆಗೆ ಬಂದು ಸೇರಿತು. ಹಾಗೆ ಮಾಡಿದರೆ ಹೇಗೆ? ಹೀಗೆ ಮಾಡಿದರೆ ಹೇಗೆ? ಹಾಗೆ ಆಗಲಿಕ್ಕಿಲ್ಲ ಹೀಗೆ ಆಗುತ್ತೆ.. ಹೀಗೆ-ಹಾಗೆ ಫುಲ್ ಸ್ಟಾಪ್ ಇಲ್ಲದ ನಾನ್ಸ್ಟಾಪ್ ಕನಸುಗಳು ತಲೆಯಲ್ಲಿ ಬರುತ್ತಲೇ ಇದ್ದವು,ನನಗೆ ಗೊತ್ತಿದೆ ಹಿಂದಿನ ಇಂಥಾ ಸಂದರ್ಭಗಳಲ್ಲೆಲ್ಲ ಕಂಡ ಕನಸುಗಳಲ್ಲಿ ಫಲಿತದ್ದು ಬೆರಳೆಣಿಕೆಗೂ
ಒಂದೆರಡು ಕಡಿಮೇನೆ..! ಆದರೂ ಕನಸು ಕಾಣದೆ ಇರೋಕಾಗುತ್ತಾ? ನನಸಾಗೆ ಬಿಡುತ್ತದೆ ಎನ್ನುವ ರೀತಿಯಲ್ಲಿ ಕನಸಿನ ಬೆನ್ನು ಹತ್ತುತ್ತಲೇ ಇದ್ದೆ. ತಿರುಕನೋರ್ವ ಕನಸು ಕಂಡ ಎನ್ನುವುದಕ್ಕಿಂತ ಒಂದು ಸ್ಟೆಪ್ ಮೇಲೆ ಎನ್ನುವಂತೆ ನನಸಾಗಬಹುದೇ ಎಂಬ ಡೌಟ್ಗೂ ಆಸ್ಪದ ಕೊಡದೆ ನಿರಂತರ ಚಲನೆಯಲ್ಲಿತ್ತು ನನ್ನ ಕನಸು.
ಅದೊಂದು ದುಡ್ಡು ಮಾಡುವ ಐಡಿಯಾ.. ಕೂಡಿಸಿ ಕಳೆದು ಗುಣಿಸಿ ಭಾಗಾಕಾರ ಹೇಗೆ ಮಾಡಿದರೂ ಲಾಭ ಘನವಾಗೇ ಇತ್ತು.. ಅಂದರೆ ಮೂರು ಪಟ್ಟು ಲಾಭ ಬರ್ತಾ ಇತ್ತು. ನಾಲ್ಕು ವರ್ಷದಲ್ಲಿ ತೀರಿಸಬೇಕಾದ ಮನೆಸಾಲ ಕನಸಿನ ನನಸಾಗುವ ಲೆಕ್ಕದಲ್ಲಿ ಎರಡೇ ವರ್ಷಕ್ಕೆ ತೀರಿಹೊಗುವಂತಿತ್ತು.ಒಂದೇ ವರ್ಷದಲ್ಲಿ ತೀರಿಸಬೇಕಾದ ಬೆಳೆಸಾಲ ಮೂರು ವರ್ಷವಾದರೂ ತೀರಿಲ್ಲವೆನ್ನುವುದು ಬೇರೆಮಾತು. ಹೀಗೆ ಲೆಕ್ಕ ಹಾಕಿ ಕರ್ಚು ತೆಗೆದರೂ ಈ ತಿಂಗಳ ಸಂಬಳದಲ್ಲಿ ಸುಮಾರು ಮೂರು ಸಾವಿರ ರೂಗಳ ಉಳಿತಾಯವಾಗುತ್ತಿತ್ತು.
ಹೀಗೆ ಕನಸಿನ ಸೌಧ ಮಾಳಿಗೆಯ ಮೇಲೆ ಮಾಳಿಗೆ ಆಗಿ ಜೋರಾದ ಕನ್ಸ್ಟ್ರಕ್ಷನ್ ನಡೆಯುತ್ತಿತ್ತು. ಅಂಬಾನಿ-ಬಿಲ್ ಗೇಟ್ಸ್ ಹೀಗೆ ಒಬ್ಬೊಬ್ಬರಿಗೂ ಒಂದೊಂದು ಮಳಿಗೆ ಕೊಡುವಷ್ಟು ಮಾಳಿಗೆಗಳ ಭರಪೂರ ಕನಸು. ಹೀಗೆ ಸ್ಪೀಡಾಗಿ ನಡೆಯುತ್ತಿದ್ದ ಕನಸಿನ ಸೌಧ ತಕ್ಷಣದಲ್ಲಿ ಬಂದ ಕರೆಂಟಿನಿಂದಾಗಿ ನಿಂತಂತಾಯ್ತು. ನಿತ್ಯದ ಜಗದ ಜಂಜಡದ ಪರದೆ ಬಂದು ಕನಸಿನ ನಾಟಕ ಮುಗಿಯುವ ಹಂತಕ್ಕೆ ಬಂದಂತಾಗಿ, ಕನಸೋ -ನನಸೋ ಇಲ್ಲ ಬರೀ ನನಸಾಗದ ಕನಸೋ ಎಂಬ ಗೊಂದಲ ಹಾಗೆ ಉಳಿಯುವಂತಾಯಿತು, ಕನಸಿನಿಂದ ಹುಟ್ಟಿದ ಹುಚ್ಚು ಆಸೆಗಳು, ಭರವಸೆಗಳು ನನ್ನನ್ನು ಎತ್ತಿಕೊಂಡು ತಿರುಗಲಾರಂಬಿಸಿದವು, ಮತ್ತೊಂದು ದಿನದ ಮತ್ತಷ್ಟು ಕನಸುಗಳನ್ನು ಕಾಣುವ 30X40ಯ ಕಾಮ್ಪೊಂಡು ಗಟ್ಟಿಯಾಗಿ ಎದ್ದು ನಿಂತಿತ್ತು.